Chief Editor
Manohar. R (Manu)
Photo Journalist
chitrataramanu@gmail.com
+91 9845549026
ತಾಯಿಯ ಕೊನೆಯಾಸೆಗಾಗಿ ಜೀವನವನ್ನೇ ಪಣಕ್ಕಿಟ್ಟ ರಾಮ.. 4/5 ****
Posted date: 28 Fri, Jul 2023 11:06:57 PM
ಕೌಸಲ್ಯಾ ಸುಪ್ರಜಾರಾಮ ನಿರ್ದೇಶಕ ಶಶಾಂಕ್ ಅವರ ಬತ್ತಳಿಕೆಯಿಂದ ಮೂಡಿಬಂದಿರುವ ಮತ್ತೊಂದು ಪಕ್ಕಾ ಫ್ಯಾಮಿಲಿ ಪ್ರಾಡಕ್ಟ್. ತಾಯಿ ಸೆಂಟಿಮೆಂಟ್ ಹಿನ್ನೆಲೆಯಲ್ಲಿ ಒಂದು ಕಮರ್ಷಿಯಲ್ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ, ತಾನು ಗಂಡಸು, ತಾನೇನೇ ತಪ್ಪು ಮಾಡಿದರೂ ಹೆಂಡತಿಯಾದವಳು ಅದನ್ನು ಪ್ರಶ್ನಿಸಬಾರದು ಎಂಬ ಧೋರಣೆ ಹೊಂದಿರುವ  
ಸಿದ್ದೇಗೌಡ(ರಂಗಾಯಣ ರಘು), ಗಂಡ ಏನೇ ಬೈದರೂ, ಹೊಡೆದರೂ ತಲೆತಗ್ಗಿಸಿಕೊಂಡು ಹೋಗುವ ತಾಯಿ ಕೌಸಲ್ಯಾ(ಸುಧಾ ಬೆಳವಾಡಿ), ಇವರಿಬ್ಬರನ್ನು ನೋಡುತ್ತ ತಂದೆಯ ಗುಣಗಳನ್ನೇ ಮೈಗೂಡಿಸಿಕೊಂಡು ಬೆಳೆಯುವ ಮಗ ರಾಮ(ಡಾಲಿಂಗ್ ಕೃಷ್ಣ), ಈ ಕುಟುಂಬದ ಒಳಗೆ ಹೊರಗೆ ನಡೆಯುವ ಘಟನೆಗಳೇ ಈ ಚಿತ್ರದ ಕಥಾವಸ್ತು, ಹೆಣ್ಣು ಎಂದರೆ ಆಕೆ ಅಡುಗೆ ಮನೆಗಷ್ಟೇ ಸೀಮಿತ ಎನ್ನುವ ಧೋರಣೆ ಇಟ್ಟುಕೊಂಡಿದ್ದ ತಂದೆ,ಸಂಜೆಯಾದರೆ ಕುಡಿದು ಮನೆಗೆ ಬಂದು ಪತ್ನಿಗೆ ಮನಬಂದಂತೆ ಥಳಿಸುತ್ತಾನೆ, ತನ್ನ ಮಗ ಕೂಡ ತನ್ನಂತೆ ಇರಬೇಕು ಎಂಬುದು ಆತನ ಬಯಕೆ, ತಂದೆಯ ಈ ನಡವಳಿಕೆ  ಪುಟ್ಟ ಮಗ ರಾಮನ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ, ಕೊನೆಗದು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ಎಂಬುದನ್ನು ಈ ಚಿತ್ರ ಹೇಳಲಿದೆ, ಬಹುತೇಕರ ಮನೆಗಳಲ್ಲಿ ನಡೆಯಬಹುದಾದ ಕಥೆಯನ್ನು ಶಶಾಂಕ್ ತುಂಬಾ ಸೂಕ್ಷ್ಮವಾಗಿ ತೆರೆಮೇಲೆ ತಂದಿದ್ದಾರೆ. ಹೆತ್ತ ತಾಯಿಯ ಬೆಲೆ ಏನೆಂದು ಆಕೆ ನಮ್ಮಿಂದ  ದೂರವಾದಾಗಲೇ ಗೊತ್ತಾಗುವುದು. ಅದು ರಾಮನ ಜೀವನದಲ್ಲಿ ನಡೆದೇ ಹೋಗುತ್ತದೆ. ಅಮ್ಮನನ್ನು ಕಳೆದುಕೊಂಡ ನಂತರ ರಾಮನಿಗೆ  ಆಕೆಯ ಮಮತೆಯ ಅರಿವಾಗುತ್ತದೆ.  ಪ್ರಥಮಾರ್ಧ ಸರಾಗವಾಗಿ ಸಾಗುವ ಕಥೆ, ಎರಡನೇ ಭಾಗದಲ್ಲಿ ಬೇರೆಯದೇ ಹಾದಿ ತೆಗೆದುಕೊಳ್ಳುತ್ತದೆ, ಕ್ಲೈಮ್ಯಾಕ್ಸ್ ವೇಳೆಗೆ ಸುಖಾಂತ್ಯ ಕಾಣುತ್ತದೆ, ನಾಯಕಿ ಮಿಲನಾ ನಾಗರಾಜ್ ಅವರ ಪಾತ್ರವನ್ನು ಬಿಡುಗಡೆಯಾಗುವವರೆಗೂ ಮುಚ್ಚಿಟ್ಟಿದ್ದ ಶಶಾಂಕ್,  ಅವರ ಮುತ್ತುಲಕ್ಷ್ಮಿ ಪಾತ್ರಕ್ಕೆ ಅಷ್ಟೊಂದು ಕುಡಿಸುವ ಅವಶ್ಯಕತೆಯಿದ್ದಿಲ್ಲ,  ನೋಡುಗರನ್ನು ಭಾವನಾತ್ಮಕವಾಗಿ ಕಟ್ಟಿಹಾಕುವಲ್ಲಿ ಕೌಸಲ್ಯಾ.. ಯಶಸ್ವಿಯಾಗಿದೆ. 
 
ನಾಯಕ ರಾಮನ ಜೀವನದಲ್ಲಿ ಇಬ್ಬರು ಯುವತಿಯರು ಎಂಟ್ರಿ ಕೊಡುತ್ತಾರೆ. ಶಿವಾನಿ(ಬೃಂದಾ ಆಚಾರ್ಯ) ಈತನ ಲೈಫ್ ನಲ್ಲಿ ತಾನಾಗೇ ಒಲಿದು ಬಂದವಳಾದರೆ, ತಾಯಿಯ ಆಸೆ ಈಡೇರಿಸಲು ಆಕೆಯೊಬ್ಬ ಮದ್ಯವ್ಯಸನಿ ಎಂದು ಗೊತ್ತಿದ್ದರೂ ಮುತ್ತುಲಕ್ಷ್ಮಿ(ಮಿಲನಾ ನಾಗರಾಜ್)ಗೆ ತಾಳಿ ಕಟ್ಟುತ್ತಾನೆ. ತನ್ನ ಅಹಂಕಾರದಿಂದಲೇ ಶಿವಾನಿಯನ್ನು ದೂರ ಮಾಡಿಕೊಳ್ಳುವ ರಾಮನಿಗೆ ತಾಯಿ ತೀರಿಕೊಂಡ ನಂತರ ಆಕೆಯ ಬೆಲೆ ಏನೆಂದು ಗೊತ್ತಾಗುತ್ತದೆ, ಮುಂದೆ  ಬದಲಾದ ರಾಮ ತನ್ನ ಅಹಂಕಾರವನ್ನು ಬದಿಗೊತ್ತಿ  ಪತ್ನಿ ಮಾಡಿದ ತಪ್ಪುಗಳನ್ನೆಲ್ಲ  ಮನ್ನಿಸುತ್ತಲೇ ಬರುತ್ತಾನೆ, ತನ್ನ ಮೆಡಿಕಲ್  ಸ್ಟಡಿಯನ್ನು ಅರ್ಧಕ್ಕೆ  ನಿಲ್ಲಿಸಿದ್ದ ಆಕೆಗೆ ಪುನ: ಕಾಲೇಜಿನಲ್ಲಿ ಸೀಟ್ ದೊರಕುವಂತೆ ಮಾಡುತ್ತಾನೆ.  ಆದರೂ  ಹೆಜ್ಜೆ ಹೆಜ್ಜೆಗೂ ರಾಮನನ್ನು ಅವಮಾನಿಸುತ್ತಲೇ ಬರುವ  ಮುತ್ತುಲಕ್ಷ್ಮಿ  ಆತನಿಗೆ  ಡೈವರ್ಸ್ ನೋಟೀಸ್ ಕೊಡುವ ಹಂತಕ್ಕೆ ಹೋದರೂ, ಹೆಂಡತಿ ಚೆನ್ನಾಗಿದ್ದರೆ ಸಾಕೆಂದು ಅದಕ್ಕೂ ಒಪ್ಪಿಗೆ ಕೊಡಲು ಸಿದ್ದನಾಗುತ್ತಾನೆ,  ತಾನು ಗಂಡಸು ಎಂಬ ಅಹಂಕಾರಿ ತಂದೆಯ ಪಾತ್ರದಲ್ಲಿ ರಂಗಾಯಣ ರಘು ಅವರ ನಟನೆ ಅಮೋಘ. ತಾಯಿ ಕೌಸಲ್ಯಾಳ ಪಾತ್ರದಲ್ಲಿ ಸುಧಾ ಬೆಳವಾಡಿ ಅವರು ಜೀವ ತುಂಬಿ ಅಭಿನಯಿಸಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಯಾವುದೇ ಸ್ವಾತಂತ್ರ್ಯ ಇಲ್ಲದೆ ಬದುಕುವ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ  ಎರಡು ಶೇಡ್ ಪಾತ್ರವಿದ್ದು, ಸೆಕೆಂಡ್ ಹಾಫ್ ನಲ್ಲಿ ಇದೇನಾ ರಾಮ ಎನ್ನುವಂತೆ ಉತ್ತಮ  ಅಭಿನಯ ನೀಡಿದ್ದಾರೆ. ಕಾಲೇಜ್ ಪೋರ್ಷನ್‌ನಲ್ಲಿ ಬರುವ  ಬೃಂದಾ ಆಚಾರ್ಯ ಅವರ  ಅಭಿನಯ ಇಷ್ಟವಾಗುತ್ತದೆ.  ಮಿಲನಾ ನಾಗರಾಜ್ ಅವರ ಸರ್‌ಪ್ರೈಸ್ ಎಂಟ್ರಿ ಚೆನ್ನಾಗಿದೆ. ಹೀರೋ ಮಾವನ ಮಗನಾಗಿ ನಟಿಸಿರುವ ನಾಗಭೂಷಣ್  ಅವರ ಕಾಮಿಡಿ  ಸೀನ್ ಗಳು  ನೋಡುಗರಿಗೆ ಹಾಸ್ಯದ ಸಿಂಚನ ನೀಡಲಿವೆ, ಕೆಲ ಸಂಭಾಷಣೆಗಳು  ಮನಸಿಗೆ ನಾಟುವಂತಿವೆ.  ಚಿತ್ರದಲ್ಲಿ  ಸುಜ್ಞಾನ್ ಅವರ ಅತ್ಯುತ್ತಮ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಮ್ಯೂಸಿಕ್  ಮ್ಯಾಜಿಕ್ ಕೌಸಲ್ಯೆಯ ಮಗ ರಾಮನಿಗೆ ಮತ್ತಷ್ಟು ಹೊಳಪು ನೀಡಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತಾಯಿಯ ಕೊನೆಯಾಸೆಗಾಗಿ ಜೀವನವನ್ನೇ ಪಣಕ್ಕಿಟ್ಟ ರಾಮ.. 4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.